Wednesday, April 27, 2011

ಎಂದೂ ಅಳದ ಮಾಲತ್ತೆ.

ಸಣ್ಣ ಕತೆ ಎಂದೂ ಅಳದ ಮಾಲತ್ತೆ. ವೈದೇಹಿ


ಮಾಲತ್ತೆ ಒಂದೇ ಸಮ ಅಳುತ್ತಿದ್ದಾಳೆ. ಯಾಕೆಂದರೆ ತರಕಾರಿ ಕತ್ತರಿಸುವಾಗ ಅವಳ ಬೆರಳು ಕೊಯ್ದಿದೆ. ಅವಳು ಅಳುವುದನ್ನು ಕಂಡರೆ ಏನು ಇಡೀ ಬೆರಳು ತುಂಡಾಗಿದೆಯೋ ಅಂತ ಅನಿಸಬೇಕು. ಹಾಗೆ. ಆಗಿದ್ದು ಸಣ್ಣದೊಂದು ಗಾಯ. ರಕ್ತ ಸುರಿಯುತ್ತಿದೆ. ‘ಬರತ’ದ ಹೊತ್ತಾದರೆ ಹೀಗೇ, ರಕ್ತ ಕಟ್ಟುವುದು ಬಹಳ ಹೊತ್ತಿನ ಮೇಲೆ ಅಂತ ಯರ‍್ಯಾರು ಸಮಾಧಾನ ಹೇಳಿದರೂ ಸಮಾಧಾನವಿಲ್ಲ. ತಾನು ಒಂದಷ್ಟು ಅಳಲೇ ಬೇಕು ಎಂದು ನಿಶ್ಚಯಿಸಿಕೊಂಡ ಹಾಗಿದೆ! ಈಚೆ ಕೊಡು ಕೈ, ನೋಡುವ, ಆ ಗಾಯವಾದರೂ ಎಂತದು, ಎಷ್ಟು ದೊಡ್ಡದು ಅಂತ ಅಂದರೂ ಕೈ ಈಚೆಗೆ ನೀಡಲೊಳ್ಳಲು. ಸಾಮಾನ್ಯವಾಗಿ ತಣ್ಣಗೆ ಒಳಗುಂಗಿನಂತಹ ಮುಖಭಾವದ ಮಾಲತ್ತೆಗೆ ಇವತ್ತು ಇಷ್ಟು ಅಳಲು ಆದದ್ದಾದರೂ ಏನು? ಎಂತೆಂಥಾ ಕಷ್ಟ ಬಂದರೂ ಅಳದವಳು, ಹುಟ್ಟಾ ದಿಟ್ಟೆ ಎನಿಸಿಕೊಂಡವಳು!
ಅವಳಿಗೆ ಬಂದ ಕಷ್ಟವೆಂದರೆ ಸಾಮಾನ್ಯದವರು ತಡೆದುಕೊಳ್ಳುವಂಥದ್ದೇ? ಹೇಳಲು ಹೋದರೆ ಕಾಲಂಶ ಹೇಳಲು ಆಗಲಿಕ್ಕಿಲ್ಲ. ಮತ್ತು ಯಾವಾಗ ಹೋಗಲು ಹೇಳುತ್ತೇವೋ ಆಗ ಇವೆಲ್ಲ ಪ್ರಪಂಚದಲ್ಲಿ ಇದ್ದ ಮಾಮೂಲು ಕಷ್ಟಗಳೇ ಎಂಬಂತೆ ಕಾಣಿಸುತ್ತವೆ. ಆದರೆ ಅದನ್ನು ಅನುಭವಿಸುವವರಿಗೆ ಅವು ಹಾಗಲ್ಲವಲ್ಲ. ಹತ್ತಿರದಲ್ಲಿಯೇ ನಿಂತು ಅನುಭವಿಸುವವರನ್ನು ನೋಡುವವರಿಗೂ ತಿಳಿಯುತ್ತದೆ, ಮಾಮೂಲು ಎನಿಸಿಕೊಂಡ ಕಷ್ಟಗಳು ಒಬ್ಬರಿಂದ ಒಬ್ಬರಿಗೆ ಎಷ್ಟು ಭಿನ್ನ ಅಂತ-
ಲುಚ್ಚ ಗಂಡ, ಬೇಕಾದಂತೆ ಸಂಪಾದನೆ ಇದ್ದರೂ ಹೆಂಡತಿ ಮಕ್ಕಳ ಹೊಟ್ಟೆ ಬರೆ ನೋಡಿಕೊಳ್ಳಬೇಕು ತಾನು ಎಂಬ ಪ್ರಜ್ಞೆ ಇಲ್ಲದವ, ಎಲ್ಲೆಂದರಲ್ಲಿ ವಾಚಾಮಗೋಚರ ಬೈಯುವವ. ಅವರು ಇವರು ಇದ್ದಾರೆ ಎಂಬ ನಗೆನಾಚಿಗೆ ಇಲ್ಲದೆ ಮಾತಿನಲ್ಲೇ ಕುಕ್ಕಿ ಕೊಲ್ಲುವವ, ಏಳೆಂದರೆ ಏಳಲೇಬೇಕು , ನಡೆ ಎಂದ ಮೇಲೆ ಮತ್ತೂ ನಿಂತಿರಲಿಕ್ಕೆ ಸಾಧ್ಯವಿಲ್ಲ. ಅವನನ್ನು ಹಿಂಬಾಲಿಸಲೇಬೇಕು. ತವರಿನಲ್ಲಿ ಒಂದು ದಿನ ಕಳೆಯುವ ಹಾಗಿಲ್ಲ.
ಅವತ್ತು ಸೋಮ ಚಿಕ್ಕಪ್ಪನ ಮದುವೆಯ ದಿನದ ಸಂಜೆಯೇ ಅವಳನ್ನು ಎಳೆದುಕೊಂಡು ಹೋಗಲಿಲ್ಲವೆ? ಎಲರೂ “ಬಿಟ್ಟು ಹೋಗು ಮಾರಾಯ, ಒಂದು ದಿನ ಇರಲಿ- ಅಬ್ಬೆ ಮನೆಯಲ್ಲಿ. ಮದುವೆಯಾದ ಲಾಗಾಯ್ತು ಅದಕ್ಕೆ ಸಂಸಾರವೇ ಆಯ್ತು” ಎಂದು ಹೇಳುತ್ತಿದ್ದಂತೆ ಹೇಳಿದಷ್ಟೂ ಹಠ ಏರಿದ ಪಿಶಾಚಿಯಂತೆ ನೀಚ ಸ್ವರದಲ್ಲಿ ಕರೆದ. “ ಹೀಗೆ ಎಲ್ಲರೂ ನನಗೆ ಹೇಳುವಂತೆ ಮಾಡಿ ಮರ್ಯಾದೆ ತೆಗೆಯುತ್ತೀಯಾ?” ಎಂದು ಬರುತ್ತಿದ್ದವಳನ್ನು ಬೇಕೆಂದೇ “ ಹೂಂ, ಬೇಗ ಸಾಗಲಿ ಹೆಜ್ಜೆ” ಎಂದು ಹಿಂದಿನಿಂದ ನೂಕಿದ.

No comments:

Post a Comment