Wednesday, April 27, 2011

ಎಂದೂ ಅಳದ ಮಾಲತ್ತೆ.

ಸಣ್ಣ ಕತೆ ಎಂದೂ ಅಳದ ಮಾಲತ್ತೆ. ವೈದೇಹಿ


ಮಾಲತ್ತೆ ಒಂದೇ ಸಮ ಅಳುತ್ತಿದ್ದಾಳೆ. ಯಾಕೆಂದರೆ ತರಕಾರಿ ಕತ್ತರಿಸುವಾಗ ಅವಳ ಬೆರಳು ಕೊಯ್ದಿದೆ. ಅವಳು ಅಳುವುದನ್ನು ಕಂಡರೆ ಏನು ಇಡೀ ಬೆರಳು ತುಂಡಾಗಿದೆಯೋ ಅಂತ ಅನಿಸಬೇಕು. ಹಾಗೆ. ಆಗಿದ್ದು ಸಣ್ಣದೊಂದು ಗಾಯ. ರಕ್ತ ಸುರಿಯುತ್ತಿದೆ. ‘ಬರತ’ದ ಹೊತ್ತಾದರೆ ಹೀಗೇ, ರಕ್ತ ಕಟ್ಟುವುದು ಬಹಳ ಹೊತ್ತಿನ ಮೇಲೆ ಅಂತ ಯರ‍್ಯಾರು ಸಮಾಧಾನ ಹೇಳಿದರೂ ಸಮಾಧಾನವಿಲ್ಲ. ತಾನು ಒಂದಷ್ಟು ಅಳಲೇ ಬೇಕು ಎಂದು ನಿಶ್ಚಯಿಸಿಕೊಂಡ ಹಾಗಿದೆ! ಈಚೆ ಕೊಡು ಕೈ, ನೋಡುವ, ಆ ಗಾಯವಾದರೂ ಎಂತದು, ಎಷ್ಟು ದೊಡ್ಡದು ಅಂತ ಅಂದರೂ ಕೈ ಈಚೆಗೆ ನೀಡಲೊಳ್ಳಲು. ಸಾಮಾನ್ಯವಾಗಿ ತಣ್ಣಗೆ ಒಳಗುಂಗಿನಂತಹ ಮುಖಭಾವದ ಮಾಲತ್ತೆಗೆ ಇವತ್ತು ಇಷ್ಟು ಅಳಲು ಆದದ್ದಾದರೂ ಏನು? ಎಂತೆಂಥಾ ಕಷ್ಟ ಬಂದರೂ ಅಳದವಳು, ಹುಟ್ಟಾ ದಿಟ್ಟೆ ಎನಿಸಿಕೊಂಡವಳು!
ಅವಳಿಗೆ ಬಂದ ಕಷ್ಟವೆಂದರೆ ಸಾಮಾನ್ಯದವರು ತಡೆದುಕೊಳ್ಳುವಂಥದ್ದೇ? ಹೇಳಲು ಹೋದರೆ ಕಾಲಂಶ ಹೇಳಲು ಆಗಲಿಕ್ಕಿಲ್ಲ. ಮತ್ತು ಯಾವಾಗ ಹೋಗಲು ಹೇಳುತ್ತೇವೋ ಆಗ ಇವೆಲ್ಲ ಪ್ರಪಂಚದಲ್ಲಿ ಇದ್ದ ಮಾಮೂಲು ಕಷ್ಟಗಳೇ ಎಂಬಂತೆ ಕಾಣಿಸುತ್ತವೆ. ಆದರೆ ಅದನ್ನು ಅನುಭವಿಸುವವರಿಗೆ ಅವು ಹಾಗಲ್ಲವಲ್ಲ. ಹತ್ತಿರದಲ್ಲಿಯೇ ನಿಂತು ಅನುಭವಿಸುವವರನ್ನು ನೋಡುವವರಿಗೂ ತಿಳಿಯುತ್ತದೆ, ಮಾಮೂಲು ಎನಿಸಿಕೊಂಡ ಕಷ್ಟಗಳು ಒಬ್ಬರಿಂದ ಒಬ್ಬರಿಗೆ ಎಷ್ಟು ಭಿನ್ನ ಅಂತ-
ಲುಚ್ಚ ಗಂಡ, ಬೇಕಾದಂತೆ ಸಂಪಾದನೆ ಇದ್ದರೂ ಹೆಂಡತಿ ಮಕ್ಕಳ ಹೊಟ್ಟೆ ಬರೆ ನೋಡಿಕೊಳ್ಳಬೇಕು ತಾನು ಎಂಬ ಪ್ರಜ್ಞೆ ಇಲ್ಲದವ, ಎಲ್ಲೆಂದರಲ್ಲಿ ವಾಚಾಮಗೋಚರ ಬೈಯುವವ. ಅವರು ಇವರು ಇದ್ದಾರೆ ಎಂಬ ನಗೆನಾಚಿಗೆ ಇಲ್ಲದೆ ಮಾತಿನಲ್ಲೇ ಕುಕ್ಕಿ ಕೊಲ್ಲುವವ, ಏಳೆಂದರೆ ಏಳಲೇಬೇಕು , ನಡೆ ಎಂದ ಮೇಲೆ ಮತ್ತೂ ನಿಂತಿರಲಿಕ್ಕೆ ಸಾಧ್ಯವಿಲ್ಲ. ಅವನನ್ನು ಹಿಂಬಾಲಿಸಲೇಬೇಕು. ತವರಿನಲ್ಲಿ ಒಂದು ದಿನ ಕಳೆಯುವ ಹಾಗಿಲ್ಲ.
ಅವತ್ತು ಸೋಮ ಚಿಕ್ಕಪ್ಪನ ಮದುವೆಯ ದಿನದ ಸಂಜೆಯೇ ಅವಳನ್ನು ಎಳೆದುಕೊಂಡು ಹೋಗಲಿಲ್ಲವೆ? ಎಲರೂ “ಬಿಟ್ಟು ಹೋಗು ಮಾರಾಯ, ಒಂದು ದಿನ ಇರಲಿ- ಅಬ್ಬೆ ಮನೆಯಲ್ಲಿ. ಮದುವೆಯಾದ ಲಾಗಾಯ್ತು ಅದಕ್ಕೆ ಸಂಸಾರವೇ ಆಯ್ತು” ಎಂದು ಹೇಳುತ್ತಿದ್ದಂತೆ ಹೇಳಿದಷ್ಟೂ ಹಠ ಏರಿದ ಪಿಶಾಚಿಯಂತೆ ನೀಚ ಸ್ವರದಲ್ಲಿ ಕರೆದ. “ ಹೀಗೆ ಎಲ್ಲರೂ ನನಗೆ ಹೇಳುವಂತೆ ಮಾಡಿ ಮರ್ಯಾದೆ ತೆಗೆಯುತ್ತೀಯಾ?” ಎಂದು ಬರುತ್ತಿದ್ದವಳನ್ನು ಬೇಕೆಂದೇ “ ಹೂಂ, ಬೇಗ ಸಾಗಲಿ ಹೆಜ್ಜೆ” ಎಂದು ಹಿಂದಿನಿಂದ ನೂಕಿದ.

ಖಾಲಿ ಗೋಡೆ

ಸಣ್ನಕತೆ
ಖಾಲಿ ಗೋಡೆ
-ವೈದೇಹಿ
ಗೋಡೆಯನ್ನು ಖಾಲಿ ಬಿಡಬೇಕೆಂದು ಅವರು ನಾಲ್ವರೂ ತೀರ್ಮಾನಿಸಿದರು. ನಾಲ್ವರು ಎಂದರೆ ತಂದೆ ತಾಯಿ ಮಗ ಮಗಳು. ಮೂಗು ಇದೆ ಎಂದು ಮೂಗುತಿ ಸುರಿದಂತೆ, ಕಿವಿಯಿದೆ ಎಂದು ಬೆಂಡೋಲೆ ಇಟ್ಟಂತೆ, ಕೈಗೆ ಬಳೆ, ಕಾಲೆಗೆ ಚೈನು ತೊಟ್ಟಂತೆ ಗೋಡೆ ಇದೆ ಎಂದು ಅದೂ ಇದೂ ನೇತು ಹಾಕುವ ಅಭ್ಯಾಸ ಬಿಟ್ಟುಬಿಡುವ ಎಂದು ಮಾತಾಡಿಕೊಂಡರು. ಗೋಡೆ ಖಾಲಿ ಇರುವಾಗ ಮಾತ್ರ ಗೋಡೆಯಾಗಿ ಕಾಣುತ್ತದೆ. ಅದನ್ನು ಅಲಂಕರಿಸಲು ಹೋದಾಗ ಕಾಣುವುದು ಅಲಂಕಾರದ ವಸ್ತುಗಳು ಮಾತ್ರ. ಗೋಡೆಯಲ್ಲ. ಹಾಗಾಗಿ ಅಂಥಲ್ಲಿ ಗೋಡೆಯ ಕುರಿತು ವಿಚಾರಗಳೇ ಏಳುವುದಿಲ್ಲ - ಎಂದುಕೊಂಡರು.

ಹೊರ ಪ್ರಪಂಚವನ್ನು ಬೇರೆ ಮಾಡಿ ಒಳಗೊಂದು ಸ್ವಂತ ಪ್ರಪಂಚ ಸೃಷ್ಟಿಸಿಕೊಡ ಬಲ್ಲ ಗೋಡೆಯೆಂಬುದೇ ಎಂತಹ ನಿಗೂಢ!.... ಆದರೆ ಇದೇ ಗೋಡೆ ಹೊರ ಪ್ರಪಂಚವನ್ನು ಬೇರೆ ಮಾಡಿ ನಮ್ಮನ್ನು ಕೂಪಮಂಡೂಕರನ್ನಾಗಿ ಮಾಡುತ್ತದೆಯಲ್ಲ!.... ಹೀಗೆ ಗೋಡೆಯ ಕುರಿತು ಅವರವರು ಅವರವರಿಗೆ ತೋಚಿದಂತೆ ಚರ್ಚಿಸುವರು.

ಗೋಡೆಯನ್ನು ಖಾಲಿ ಇಡಲು ಅವರು ಎಷ್ಟು ಕಷ್ಟಪಟ್ಟರು ಎಂಬುದೂ ಅವರವರಿಗೇ ಗೊತ್ತು. ಕಾರಣ, ಅವರಲ್ಲಿ ನಾಲ್ವರೂ ಕೂಡ ಗೋಡೆಗೆ ಏನಾದರೂ ನೇತಾಡಿಸುವುದರಲ್ಲಿ ಪ್ರವೀಣರೇ. ಆ ಮೂಲಕ ಸುಖವೋ, ದುಃಖವೋ, ಸಮಾಧಾನ ನೆಮ್ಮದಿಗಳೋ, ತಮ್ಮದೇ ಕಲ್ಪನೆಗಳೋ ಹೊರಹೊಮ್ಮಿ ತಾನು ಹಗುರವಾದಂತೆ ಎಂದುಕೊಂಡವರು. ಆ ನಾಲ್ವರೂ ನಾಲ್ಕು ಅಭಿರುಚಿಯವರು. ತಂದೆಯೋ! ಯಾರು ಏನು ಉಡುಗೊರೆ ಕೊಟ್ಟರೂ ಅದು ನೇತಾಡಲು ಯೋಗ್ಯವೆಂದಾದರೆ ಗೋಡೆಯ ಮೇಲೆ ನೇತಾಡಲೇಬೇಕು. ಇಲ್ಲವಾದರೆ ಕೊಟ್ಟವರಿಗೆ ಅವಮಾನ ಮಾಡಿದಂತೆ ಎಂದೆಣಿಸುವ ಮನುಷ್ಯ. ಮಗಳು ದಿನಕ್ಕೊಂದು ಬೋರ್ಡುಗಳನ್ನು ತಂದು ತೂಗು ಹಾಕುವಾಕೆ. ಉದಾ: ‘ಥಿಂಕ್ ಪಾಸಿಟಿವ್’ ಇತ್ಯಾದಿ. ಮಗ ತಾನು ಎಲ್ಲೆಲ್ಲಿ ಪ್ರವಾಸ ಹೋಗುತ್ತಾನೋ ಅಲ್ಲಿಂದ ‘ವಾಲ್’ ನಲ್ಲಿ ‘ಹ್ಯಾಂಗ್’ ಮಾಡಲೆಂದೇ ತಂದ ವಸ್ತುಗಳನ್ನು ತನಗೆ ಕಂಡಂತೆ ತೂಗು ಹಾಕಿ ಖುಶಿ ಪಡುವವನು. ತಾಯಿ, ಈ ಮೂವರೂ ಕಾಲೇಜು ಆಫೀಸು ಎಂದು ಮನೆ ಬಿಟ್ಟಾಗ ಮೆಲ್ಲ ತನಗೆ ಚಂದ ಕಂಡದ್ದನ್ನು ತನಗೆ ಸೂಕ್ತವೆಂದು ಅನಿಸಿದಲ್ಲಿ ತೂಗಿಸಿ ಉಳಿದದ್ದನ್ನು ಮರೆಮಾಡುವವಳು. ಇದರಿಂದ ಸದಾ ಚರ್ಚೆ, ಗದ್ದಲ. ನಾಲ್ವರೂ ತಾವೇ ಸರಿ ಎಂದು ತಿಳಿದುಕೊಂಡವರಾದ್ದರಿಂದ ಜಗಳ ಮುಗಿಯುವಾಗ ಪುನಃ ಅವರವರು ಇಟ್ಟ ವಸ್ತುಗಳು ಅವರು ಇಟ್ಟಂತೆಯೇ ವಿರಾಜಮಾನವಾಗಿ, ತಾಯಿ ಅವರೆಲ್ಲ ಮತ್ತೆ ಗೈರು ಹಾಜರಾಗುವುದನ್ನೇ ಕಾಯುವಂತಾಗುತ್ತಿತ್ತು.

Monday, April 18, 2011

ಕನ್ನಡ ಸಾಹಿತ್ಯ » Javascripts » Tree


Example



open all | close all





©2002-2003 Geir Landrö


ಸಮಕಾಲೀನ ಪೀಳಿಗೆಯ ಕತೆಗಾರರಲ್ಲಿ ಅಬ್ಬಾಸ್ ಮೇಲಿನಮನಿ ಹೆಸರು ಬಹು ಮುಖ್ಯವಾದುದು. ಶರಣರು ಮೆಟ್ಟಿದ ನೆಲದಲ್ಲಿರುವ ಅಬ್ಬಾಸ್ ಮೌಲ್ಯಗಳ ಬಿತ್ತು ಕಾಯಕವನ್ನು ತಮ್ಮ ಸಂವೇದನಶೀಲ ಕತೆಗಳ ಮೂಲಕ ಮಾಡುತ್ತ ಬಂದಿದ್ದಾರೆ. ಆಡು-ನುಡಿ ಸೊಗಡಿನ ಭಾಷೆ; ಕಾವ್ಯದ ಲಯದಲ್ಲಿ ಓದುಗನಿಗೆ ನವನವೀನ ಪ್ರತಿಮೆ, ಆಕೃತಿಗಳನ್ನು ಕಟ್ಟಿಕೊಡುವುದನ್ನು ಇವರು ಕತೆಗಳ ಮೂಲಕ ಮಡಿರುತ್ತಾರೆ.

ಹಿಂದೂ ಮುಸ್ಲಿಂ ಸಮುದಾಯಗಳ ಸಾಮಾಜಿಕ ಸಂಬಂಧಗಳನ್ನು, ಅದರ ಸಂವೇದನೆಗಳನ್ನು ಅಬ್ಬಾಸ್‌ರ ಕತೆಗಳು ಕಟ್ಟಿಕೊಡುತ್ತವೆ. ಒಂದು ಸಮಾಂತರದ ನೆಲೆಯಲ್ಲಿ ನಿಮತು ಧ್ಯಾನಸ್ಥನಾಗಿ ಕಾಣುವ ಪರಿ ಅನನ್ಯ. ಸಮಾಜದ ಆ ಬಗೆಯ ವಿವಿಧ ಮುಖಗಳ ಅನುಭೂತಿ ಇವರ ಕತೆಗಳಲ್ಲಿದೆ.

ಕವನ ಸಂಕಲನ:

೧. ಕಥೆಯಾದಳು ಹುಡುಗಿ
೨. ಭಾವೈಕ್ಯ ಬಂಧ
೩. ಪ್ರೀತಿ ಬದುಕಿನ ಹಾಡು

ಕಥಾ ಸಂಕಲನ:

೧. ಪ್ರೀತಿಸಿದವರು
೨. ಕಣ್ಣ ಮುಂದಿನ ಕಥೆ
೩. ಅರ್ಧ ಸತ್ಯಗಳು (ಬನಹಟ್ಟಿಯ ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ)
೪. ಮತ್ತೊಂದು ಕರ್ಬಲಾ (ಮಂಗಳೂರಿನ ಮುಹ್ಯುದ್ದೀನ್ ಸಾಹಿತ್ಯ ಪ್ರಶಸ್ತಿ)
೫. ಅಬ್ಬಾಸರ ಐವತ್ತು ಕಥೆಗಳು (ಡಾ. ಗೊರೂರು ಸಾಹಿತ್ಯ ಪ್ರಶಸ್ತಿ)
೬. ಹುಡುಕಾಟ (ಪಿ.ಲಂಕೇಶ ಕಥಾ ಪ್ರಶಸ್ತಿ ಹಾಗೂ ಶಿವಾನಂದ ಪಾಟೀಲ ಕಥಾ ಪ್ರಶಸ್ತಿ)
೭. ಅರ್ಥ (ಕನ್ನಡ ಸಾಹಿತ್ಯ ಪರಿಷತ್ತಿನ ಸಮೀರವಾಡಿ ದತ್ತಿ ಪ್ರಶಸ್ತಿ)