Wednesday, April 27, 2011

ಖಾಲಿ ಗೋಡೆ

ಸಣ್ನಕತೆ
ಖಾಲಿ ಗೋಡೆ
-ವೈದೇಹಿ
ಗೋಡೆಯನ್ನು ಖಾಲಿ ಬಿಡಬೇಕೆಂದು ಅವರು ನಾಲ್ವರೂ ತೀರ್ಮಾನಿಸಿದರು. ನಾಲ್ವರು ಎಂದರೆ ತಂದೆ ತಾಯಿ ಮಗ ಮಗಳು. ಮೂಗು ಇದೆ ಎಂದು ಮೂಗುತಿ ಸುರಿದಂತೆ, ಕಿವಿಯಿದೆ ಎಂದು ಬೆಂಡೋಲೆ ಇಟ್ಟಂತೆ, ಕೈಗೆ ಬಳೆ, ಕಾಲೆಗೆ ಚೈನು ತೊಟ್ಟಂತೆ ಗೋಡೆ ಇದೆ ಎಂದು ಅದೂ ಇದೂ ನೇತು ಹಾಕುವ ಅಭ್ಯಾಸ ಬಿಟ್ಟುಬಿಡುವ ಎಂದು ಮಾತಾಡಿಕೊಂಡರು. ಗೋಡೆ ಖಾಲಿ ಇರುವಾಗ ಮಾತ್ರ ಗೋಡೆಯಾಗಿ ಕಾಣುತ್ತದೆ. ಅದನ್ನು ಅಲಂಕರಿಸಲು ಹೋದಾಗ ಕಾಣುವುದು ಅಲಂಕಾರದ ವಸ್ತುಗಳು ಮಾತ್ರ. ಗೋಡೆಯಲ್ಲ. ಹಾಗಾಗಿ ಅಂಥಲ್ಲಿ ಗೋಡೆಯ ಕುರಿತು ವಿಚಾರಗಳೇ ಏಳುವುದಿಲ್ಲ - ಎಂದುಕೊಂಡರು.

ಹೊರ ಪ್ರಪಂಚವನ್ನು ಬೇರೆ ಮಾಡಿ ಒಳಗೊಂದು ಸ್ವಂತ ಪ್ರಪಂಚ ಸೃಷ್ಟಿಸಿಕೊಡ ಬಲ್ಲ ಗೋಡೆಯೆಂಬುದೇ ಎಂತಹ ನಿಗೂಢ!.... ಆದರೆ ಇದೇ ಗೋಡೆ ಹೊರ ಪ್ರಪಂಚವನ್ನು ಬೇರೆ ಮಾಡಿ ನಮ್ಮನ್ನು ಕೂಪಮಂಡೂಕರನ್ನಾಗಿ ಮಾಡುತ್ತದೆಯಲ್ಲ!.... ಹೀಗೆ ಗೋಡೆಯ ಕುರಿತು ಅವರವರು ಅವರವರಿಗೆ ತೋಚಿದಂತೆ ಚರ್ಚಿಸುವರು.

ಗೋಡೆಯನ್ನು ಖಾಲಿ ಇಡಲು ಅವರು ಎಷ್ಟು ಕಷ್ಟಪಟ್ಟರು ಎಂಬುದೂ ಅವರವರಿಗೇ ಗೊತ್ತು. ಕಾರಣ, ಅವರಲ್ಲಿ ನಾಲ್ವರೂ ಕೂಡ ಗೋಡೆಗೆ ಏನಾದರೂ ನೇತಾಡಿಸುವುದರಲ್ಲಿ ಪ್ರವೀಣರೇ. ಆ ಮೂಲಕ ಸುಖವೋ, ದುಃಖವೋ, ಸಮಾಧಾನ ನೆಮ್ಮದಿಗಳೋ, ತಮ್ಮದೇ ಕಲ್ಪನೆಗಳೋ ಹೊರಹೊಮ್ಮಿ ತಾನು ಹಗುರವಾದಂತೆ ಎಂದುಕೊಂಡವರು. ಆ ನಾಲ್ವರೂ ನಾಲ್ಕು ಅಭಿರುಚಿಯವರು. ತಂದೆಯೋ! ಯಾರು ಏನು ಉಡುಗೊರೆ ಕೊಟ್ಟರೂ ಅದು ನೇತಾಡಲು ಯೋಗ್ಯವೆಂದಾದರೆ ಗೋಡೆಯ ಮೇಲೆ ನೇತಾಡಲೇಬೇಕು. ಇಲ್ಲವಾದರೆ ಕೊಟ್ಟವರಿಗೆ ಅವಮಾನ ಮಾಡಿದಂತೆ ಎಂದೆಣಿಸುವ ಮನುಷ್ಯ. ಮಗಳು ದಿನಕ್ಕೊಂದು ಬೋರ್ಡುಗಳನ್ನು ತಂದು ತೂಗು ಹಾಕುವಾಕೆ. ಉದಾ: ‘ಥಿಂಕ್ ಪಾಸಿಟಿವ್’ ಇತ್ಯಾದಿ. ಮಗ ತಾನು ಎಲ್ಲೆಲ್ಲಿ ಪ್ರವಾಸ ಹೋಗುತ್ತಾನೋ ಅಲ್ಲಿಂದ ‘ವಾಲ್’ ನಲ್ಲಿ ‘ಹ್ಯಾಂಗ್’ ಮಾಡಲೆಂದೇ ತಂದ ವಸ್ತುಗಳನ್ನು ತನಗೆ ಕಂಡಂತೆ ತೂಗು ಹಾಕಿ ಖುಶಿ ಪಡುವವನು. ತಾಯಿ, ಈ ಮೂವರೂ ಕಾಲೇಜು ಆಫೀಸು ಎಂದು ಮನೆ ಬಿಟ್ಟಾಗ ಮೆಲ್ಲ ತನಗೆ ಚಂದ ಕಂಡದ್ದನ್ನು ತನಗೆ ಸೂಕ್ತವೆಂದು ಅನಿಸಿದಲ್ಲಿ ತೂಗಿಸಿ ಉಳಿದದ್ದನ್ನು ಮರೆಮಾಡುವವಳು. ಇದರಿಂದ ಸದಾ ಚರ್ಚೆ, ಗದ್ದಲ. ನಾಲ್ವರೂ ತಾವೇ ಸರಿ ಎಂದು ತಿಳಿದುಕೊಂಡವರಾದ್ದರಿಂದ ಜಗಳ ಮುಗಿಯುವಾಗ ಪುನಃ ಅವರವರು ಇಟ್ಟ ವಸ್ತುಗಳು ಅವರು ಇಟ್ಟಂತೆಯೇ ವಿರಾಜಮಾನವಾಗಿ, ತಾಯಿ ಅವರೆಲ್ಲ ಮತ್ತೆ ಗೈರು ಹಾಜರಾಗುವುದನ್ನೇ ಕಾಯುವಂತಾಗುತ್ತಿತ್ತು.

No comments:

Post a Comment